ಸ್ಥಾವರ - ಜಂಗಮ - ಪ್ರೊ K. R. ಪ್ರೇಮಲೀಲಾ, ಮೈಸೂರು. 05/13/2022
ಸ್ಥಾವರ - ಜಂಗಮ
-----------------------------
ಬಸವಣ್ಣನವರ ಪ್ರಸಿದ್ಧ ವಾದ ಈ ವಚನ ದೇವಾಲಯ ನಿರಾಕರಣಕ್ಕೆ ಸಂಬಂಧ ಪಟ್ಟಿದ್ದಾದರೂ, ವೀರಶೈವ ಧರ್ಮದ ತಿರುಳು.
"ಉಳ್ಳವರು ಶಿವಾಲಯವ ಮಾಡುವರು.
ನಾನೇನ ಮಾಡುವೆ?
ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಸವಯ್ಯ.....
ಸ್ಥಾವರಕ್ಕಳಿವುಂಟು , ಜಂಗಮಕ್ಕಳಿವಿಲ್ಲ !!
ಸ್ಥಾವರ, ಜಂಗಮ - ಈ ಪದಗಳು ವೀರಶೈವಧರ್ಮದ ಪಾರಿಭಾಷಿಕ ಪದಗಳು.
ಜಗತ್ತಿನ ವಿಚಾರಧಾರೆಗೆ ಅಮೂಲ್ಯ ಕೊಡುಗೆಗಳು. ಸ್ಥಾವರ ಎಂದರೆ ಜಡವಾದುದು . ಚೈತನ್ಯರಹಿತವಾದದ್ದು, ( static ). ಅದು ಎಂದಾದರೂ ನಾಶಕ್ಕೆ ಒಳಗಾಗಬೇಕು. ಜಂಗಮ ಎಂದರೆ ಚಲನಶೀಲವಾದುದು, ಚೈತನ್ಯಾತ್ಮಕ ವಾದುದು. ( dynamic )
ಅದು ಅವಿನಾಶಿ.
ಒಂದು ನಿದರ್ಶನದೊಂದಿಗೆ ವಿವರಿಸವುದಾದರೆ - ನೀರು ಹರಿಯದೆ ಮಡುಗಟ್ಟಿ ನಿಂತರೆ, ಕೊಳೆತು ನಾರುತ್ತದೆ, ಪಾಚಿಗಟ್ಟುತ್ತದೆ. ಹರಿಯುತ್ತಿದ್ದರೆ ಶುದ್ಧವಾಗಿರುತ್ತದೆ. ನಿಂತನೀರು ಅಸ್ವಸ್ಥತೆಗೆ ಕಾರಣವಾದರೆ, ಹರಿಯುವನೀರು ಆರೋಗ್ಯಪ್ರದವಾಗಿರುತ್ತದೆ. ಹಾಗೇ ಒಬ್ಬ ವ್ಯಕ್ತಿ ಸದಾ ಸೋಮಾರಿಯಾಗಿ ಉಣ್ಣುತ್ತ, ತಿನ್ನುತ್ತ ಕುಳಿತಲ್ಲೇ ಕುಳಿತಿದ್ದರೆ ಸುಲುಭವಾಗಿ ರೋಗಗ್ರಸ್ತ ನಾಗುತ್ತಾನೆ. ಲವಲವಿಕೆಯಿಂದ ಓಡಾಡುವ ವ್ಯಕ್ತಿ ಆರೋಗ್ಯಶಾಲಿಯಾಗಿರುತ್ತಾನೆ .ಚಿತ್ತವೂ ಸ್ವಸ್ಥ ವಾಗಿರುತ್ತದೆ.
ಭಾರತೀಯ ಸಮಾಜ ಈ ಹೊತ್ತು ಒಂದು ರೀತಿಯಲ್ಲಿ ಸ್ಥಾವರ ವಾಗಿ ಪರಿಣಮಿಸಿದೆ. ವ್ಯವಸ್ಥೆಯಿಂದ ಜಡ್ಡುಗಟ್ಟಿಹೋಗಿದೆ. ಮತ್ತೆ ಅದು ಜಂಗಮವಾಗಬೇಕು. ಜೀವನದಿಯಾಗಿ ಪ್ರವಹಿಸಬೇಕು. ಈ ಪರಿವರ್ತನೆ ತರಲು ಹನ್ನೆರಡನೆಯ ಶತಮಾನದ ಶರಣರು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಮತ್ತೆ ಇಂದು ಅದೇ ಕೆಲಸವಾಗಬೇಕಾಗಿದೆ. ಮೇಲೆ ಉದ್ಧರಿಸಿರುವ ಬಸವಣ್ಣನವರ ಇಡೀ ವಚನ ಎಲ್ಲ ಅರ್ಥಗಳಲ್ಲೂ ಆಧುನಿಕ ಸಂದರ್ಭಕ್ಕೆ ಸಂಗತ ಮತ್ತು ಶ್ರೇಯಸ್ಕರ.
ಶರಣರ ಕಾಯಕ ತತ್ವ - ಪ್ರೊ. ಮಲ್ಲಣ್ಣ ಎಸ್, ಮೈಸೂರು. 05/13/2022
ಬಸವಾದಿ ಶರಣರು ಜೀವಿಗಳ ಸಂತೃಪ್ತಿಗೆ ಮೂಲವಾಗಿರುವ ಚಲನಶೀಲತೆಗೆ, ಅಂದರೆ ತನ್ನ ಶರೀರದಿಂದ ಮಾಡುವ ಕಾಯಕಕ್ಕೆ, ಅತ್ಯಂತ ಮಹತ್ವವನ್ನು ನೀಡಿದ್ದಾರೆ. 'ಕಾಯಕವೇ ಕೈಲಾಸ' ಎಂಬ ಧ್ಯೇಯ ವಾಕ್ಯದ ಆಧಾರದ ಮೇಲೆ ಶರಣರು ತಮ್ಮ ಶರೀರವನ್ನು ದಂಡಿಸಿ, ಗಳಿಸಿದ ಧನದಲ್ಲಿ ದಾಸೋಹ ಮಾಡಿ, ಉಳಿದುದನ್ನು ತಾವುಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಕಾಯಕವನ್ನು ಕಾಯದಿಂದ ಮಾಡಿದಾಗ ಉಂಟಾಗುವ ಸಂತೃಪ್ತಿ ಅವರ್ಣನೀಯ. ಅದೊಂದು ಧ್ಯಾನಸ್ಥಿತಿ. "ಕಾಯಕದಲಿ ನಿರತನಾದಡೆ" ಎಲ್ಲವನ್ನೂ ಮರೆಯಬೇಕು. ಇಂತಹ ತಲ್ಲೀನತೆಯೇ ನಿಜವಾದ ಕಾಯಕತತ್ವ. 'ಕಾಯಕ' ಎನ್ನುವುದು ವಚನ ಸಾಹಿತ್ಯದ 'ಸ್ಥಾಯಿಭಾವ'. ಇದು ಕೇವಲ ಭೌತಿಕ ಕ್ರಿಯೆಯಲ್ಲ – ಇದೊಂದು 'ಜ್ಞಾನ - ಕ್ರಿಯೆ' ಗಳ ಸಂಗಮ- ಅಂದರೆ ಅರಿವು-ಆಚಾರಗಳ ಸಮಾಗಮ.
ಇಂತಹ ಕಾಯಕವನ್ನು ಮನಸಾರೆ ಮಾಡಬೇಕು. ಡಿ.ಹೆಚ್. ಲಾರೆನ್ಸ್ (D.H. Lawrence) ತನ್ನ 'work' ಎನ್ನುವ ಕವಿತೆಯಲ್ಲಿ ಕಾಯಕವನ್ನು ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಷ್ಟೇ, ಪ್ರೀತಿ ಹಾಗೂ ತನ್ಮಯತೆಯಿಂದ ಮಾಡಬೇಕು. ಇಲ್ಲದಿದ್ದರೆ ಅಂತಹ ಕಾಯಕವನ್ನು ಮಾಡಲೇ ಬಾರದೆಂದಿದ್ದಾನೆ. ಇಂದು ನಮ್ಮ ಅನೇಕ ಯುವಕರ ಮನಸ್ಥಿತಿಯನ್ನು ಒಬ್ಬ ವಿಮರ್ಶಕ ಹೀಗೆಂದಿದ್ದಾರೆ "Today unfortunately, many youngmen search for Jobs, but when they get it, they don't work", ಅಂದರೆ Job security ಇದ್ದರೆ work ಮಾಡದೆ ಮೈಗಳ್ಳತನ ಬೆಳೆಸಿಕೊಳ್ಳುತ್ತಾರೆ.
ಇದನ್ನರಿತೇ ಶರಣರು,
"ಕ್ರಿಯೆಯಿಲ್ಲದ ಅರಿವು ವ್ಯರ್ಥ
ಅರಿವಿಲ್ಲದ ಕ್ರಿಯೆಯೂ ಅಪಾಯಕಾರಿ" ಎಂದಿದ್ದಾರೆ.
ಅಕ್ಕ ಹೇಳಿರುವಂತೆ,
'ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ, ನೀನು' ಶರಣರ ಪ್ರಕಾರ ತನು-ಮನ ಕರಗಬೇಕು. ಹಾಗೆಯೇ ಭಾವಶುದ್ಧಿ ಇರಬೇಕು – "ಬಿತ್ತ ಶುದ್ಧನಾಗಿ ಕಾಯಕವ ಮಾಡುವಲ್ಲಿ ಸದ್ಭಕ್ತರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು", ಎಂದು ಅರುಹಿದರು.
ಇಂತಹ ಸತ್ಯಶುದ್ಧ ಕಾಯಕದಿಂದ ತಂದ ಧನವನ್ನು ಸಮರ್ಪಣಾಭಾವದಿಂದ ಸಮಾಜಕ್ಕೆ (ಜಂಗಮಕ್ಕೆ) ಅರ್ಪಿಸುವುದೇ ದಾಸೋಹ. ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಯಾವುದೇ ದಾನ ದಾಸೋಹ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದಲೇ ಶರಣರು 'ಸೋಹಂ, ಶಿವೋಹಂ ಭಾವಗಳನಳಿದು 'ದಾಸೋಹಂ' ಭಾವವ ಕರುಣಿಸೆಂದು ಪ್ರಾರ್ಥಿಸಿದರು – ದಾನ ಎಂದರೆ ಅಹಂಕಾರ, ದಾಸೋಹಂ ಎಂದರೆ ಅಹಂಕಾರ ನಿರಸನ.
ಇಲ್ಲಿ ನಾನು ಕಾಯಕ ದಾಸೋಹ ಕಲ್ಪನೆಯ ಒಂದು ಪಕ್ಷಿನೋಟವನ್ನು ಮಾತ್ರ ನೀಡಿದ್ದೇನೆ. ಇಡೀ ಜಗತ್ತಿನ ಆರ್ಥಿಕ ಸಿದ್ಧಾಂತವೇ ಈ ಶಬ್ಧಗಳ ಮೇಲೆ ನಿಂತಿದೆ. ಬಸವಾದಿ ಶರಣರು ದಾನ ಸಂಸ್ಕೃತಿಯನ್ನು ದಾಸೋಹ ಸಂಸ್ಕೃತಿಯನ್ನಾಗಿಸಿ, ಈ ಕಲ್ಪನೆಗೆ ಒಂದು ಉತ್ತಮ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ತಳಹದಿಯನ್ನು ನಿರ್ಮಿಸಿದ್ದಾರೆ.
ಆದುದರಿಂದಲೇ ಶರಣರ ಚಿಂತನೆಗಳು ನಿತ್ಯಸತ್ಯ.
ಬಸವ ಜಯಂತಿ ಅಂದಾಕ್ಷಣ ನನ್ನ ಮನಸ್ಸಿಗೆ ಬರೋದು ನನ್ನ ಊರು, ನಮ್ಮ ಮನೆಯಲ್ಲಿ ಇದ್ದಂತಹ ಸುಂದರವಾದ ಜೋಡಿ ಎತ್ತುಗಳು, ನಮ್ಮ ಊರಿನಲ್ಲಿ ನಡೆಯುತ್ತಿದ್ದಂತಹ ಸಡಗರದ ಬಸವನ ಹಬ್ಬ ಆಚರಣೆ. ಆಹಾ! ಅದೇನು ಸಂಭ್ರಮ ಅಂತೀರಾ?
ಹಬ್ಬದ ದಿನ ಬೆಳಗ್ಗೇನೇ, ಎಲ್ಲಾ ಎತ್ತುಗಳು, ಹಸು ಕರುಗಳನ್ನು ಹತ್ತಿರದಲ್ಲೇ ಇದ್ದಂತಹ ಕೆರೆಯ ನೀರಿನಲ್ಲಿ ಸ್ನಾನ ಮಾಡಿಸಿ ಕರೆತಂದು, ಅವುಗಳ ಕೋಡುಗಳನ್ನು ನಯಸ್ಸಾಗುವಂತೆ ಉಜ್ಜಿ, ನಂತರ ಬಣ್ಣ ಹಚ್ಚಿ, ಕತ್ತರಿಸಿದ ಬಣ್ಣ ಬಣ್ಣದ ಮಿಂಚಿನ ಕಾಗದಗಳನ್ನು ಆ ಕೋಡುಗಳಿಗೆ ಅಂಟಿಸಿ, ಸಣ್ಣ ಸಣ್ಣ ಬಲೂನುಗಳನ್ನು ಕೋಡಿನ ತುದಿಗೆ ಕಟ್ಟಿ ಅಲಂಕರಿಸಿ, ಗಂಟೆ ಮತ್ತು ಗೆಜ್ಜೆಗಳಿಂದ ಮಾಡಿದ ಸುಂದರವಾದ ಹಾರಗಳನ್ನು ಹಾಕಿ, ಹರಿಶಿನ, ಕುಂಕುಮ, ಹೂವು ಇತ್ಯಾದಿಗಳಿಂದ ಪೂಜಿಸಿದ ನಂತರ ನನ್ನ ತಂದೆಯವರೊಂದಿಗೆ ನನ್ನ ಅಣ್ಣಂದಿರು ಬಿಳಿ ಬಣ್ಣದ ಅಂಗಿ, ಪಂಚೆ ತೊಟ್ಟು, ತಲೆಗೆ ಪೇಟ ಧರಿಸಿ ಅಲಂಕರಿಸಿದ ಎತ್ತುಗಳ ಜೊತೆ ತಮಟೆ ವಾದ್ಯಗಳೊಂದಿಗೆ ನಮ್ಮ ಊರಿನಲ್ಲಿ ನಡೆಯುತ್ತಿದ್ದಂತಹ ಮೆರವಣಿಗೆಯಲ್ಲಿ ಭಾಗಿಯಾಗ್ತಾ ಇದ್ರು. ಇದೇ ರೀತಿ ಅಲಂಕರಿಸಿದ ಅನೇಕ ಜೋಡಿ ಎತ್ತುಗಳ ಜೊತೆ ಇಡೀ ಊರಿನ ಜನ ಸಮೂಹವೇ ಆ ಸಂಭ್ರಮಕ್ಕೆ ಸಾಕ್ಷಿ ಆಗ್ತಾ ಇದ್ರು. ಈ ರೀತಿ ಸಿಂಗರಿಸಿದ ಎತ್ತು ಮತ್ತು ಹೋರಿ ಕರುಗಳನ್ನ ನೋಡೋದೇ ಕಣ್ಣುಗಳಿಗೆ ಹಬ್ಬ. ಬಾಲ್ಯ ದಿನಗಳಲ್ಲಿ ನೋಡಿದಂತಹ ಈ ಆಚರಣೆ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ.
ಶಾಲೆಯಲ್ಲಿ ವಿಶ್ವಗುರು ಬಸವಣ್ಣವರ ಬಗ್ಗೆ ಕಲಿಯೋ ತನಕ “ಬಸವ” ಅಂದ್ರೆ “ಎತ್ತು ಅಥವಾ ಹೋರಿ ಕರು” ಎಂದಷ್ಟೇ ನನ್ನ ಅನಿಸಿಕೆಯಾಗಿತ್ತು. ಆಗ ನಮ್ಮ ಹಳ್ಳಿಯಲ್ಲಿ ಇವತ್ತಿನ ಹಾಗೆ ಟಿವಿ, ಇಂಟರ್ನೆಟ್, ಫೋನ್, ಲೈಬ್ರರಿ ಯಾವುದೂ ಇರಲಿಲ್ಲ. ಹಾಗಾಗಿ ಶಾಲೆಯಲ್ಲಿ ಕಲಿತಿದ್ದಷ್ಟೇ ನಮಗೆ ಪಾಠ. ನನಗೆ ನೆನಪಿರೋ ಹಾಗೆ ನಮ್ಮ ಗುರುಗಳು ಕಲಿಸಿದಂತಹ ಮೊದಲ ವಚನ,
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದನಬೇಕು
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯಾ?
ಆ ವಯಸ್ಸಿನಲ್ಲಿ ಈ ವಚನ ನನ್ನ ಮನಸ್ಸಿಗೆ ಬಹಳವಾಗಿ ನಾಟಿತ್ತು. ಎಷ್ಟರ ಮಟ್ಟಿಗೆ ಅಂದ್ರೆ ಯಾವಾಗಲೂ ಒಳ್ಳೆಯದನ್ನೇ ಮಾತನಾಡಬೇಕು, ಯಾವತ್ತೂ ಕೆಟ್ಟ ಪದಗಳನ್ನ ಉಪಯೋಗಿಸಬಾರದು ಅನ್ನೋದು ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತ್ತು. ಈ ಪಾಠವನ್ನು ನಾನು ಯಾವತ್ತೂ ಮರೆತಿಲ್ಲ ಹಾಗೇನೇ ಮರೆಯೋದು ಇಲ್ಲ. ಅದಕ್ಕೆ ಮುಖ್ಯ ಕಾರಣ ಬಸವಣ್ಣನವರ ಈ ಒಂದು ಅರ್ಥಗರ್ಭಿತವಾದ ವಚನ.
ನಂತರದ ದಿನಗಳಲ್ಲಿ “ಕಾಯಕವೇ ಕೈಲಾಸ” ಅನ್ನೋ ಮಾತು ಕೂಡ ಅಷ್ಟೇ ಪ್ರಭಾವ ಬೀರಿತ್ತು. ಅಷ್ಟೇನೂ ಮುಂದುವರೆಯದ ಹಳ್ಳಿಯಾದ್ದರಿಂದ ಅಲ್ಲಿನ ಮನಸ್ಥಿತಿ ಹೇಗಿತ್ತಪ್ಪಾ ಅಂದ್ರೆ ಹೆಣ್ಣು ಮಕ್ಕಳಿಗೆ ಕಾಲೇಜು ಶಿಕ್ಷಣದ ಅವಶ್ಯಕತೆ ಇಲ್ಲ ಅಂತಾನೇ ಎಲ್ಲರೂ ಹೇಳ್ತಾ ಇದ್ರು. ಆಗ ನನ್ನ ಪುಟ್ಟ ಮನಸ್ಸಿನಲ್ಲಿ ಮೂಡುತಿದ್ದ ಪ್ರಶ್ನೆ, ಹೆಣ್ಣು ಮಕ್ಕಳು ಯಾಕೆ ಮನೆ ಕೆಲಸವಷ್ಟೇ ಮಾಡಬೇಕು? ಬೇರೆ ಕಾಯಕ ಯಾಕೆ ಮಾಡಬಾರ್ದು ಅನ್ನೋದು. ಶಿಕ್ಷಣವೇ ಇದಕ್ಕೆ ಉತ್ತರ ಅಂತ ತಿಳಿದಾಗ ಚೆನ್ನಾಗಿ ಓದಿ, ಹಠ ಮಾಡಿ ಕಾಲೇಜಿಗೆ ಸೇರಿ ನಂತರ ಇಡೀ ಊರಿಗೇ ಇಂಜಿನಿಯರಿಂಗ್ ಪದವಿ ಪಡೆದ ಮೊದಲ ಹೆಣ್ಣು ಮಗಳು ಅನಿಸಿಕೊಂಡಿದ್ದು ಈಗ ಇತಿಹಾಸ. ಈ ಕಥೆ ಯಾಕೆ ಹೇಳ್ತಾ ಇದೀನಿ ಅಂದ್ಕೊಂಡ್ರಾ? ನಾನೇನು ಹೇಳೋದಕ್ಕೆ ಹೊರಟಿದೀನಿ ಅಂದ್ರೆ ಬಸವಣ್ಣನವರು ಶತಮಾನಗಳ ಹಿಂದೇನೇ ಎಲ್ಲರೂ ಸಮಾನರು ಅಂತ ಹೇಳಿದ್ರು, ಆದ್ರೆ ಅಸಮಾನತೆಯ ಸಮಸ್ಯೆಯನ್ನ ನಾವೂ ಅನುಭವಿಸಿದ್ದೇವೆ ಹಾಗೇನೇ ಕೆಲ ಪ್ರದೇಶಗಳಲ್ಲಿ ಈಗಲೂ ಸಮಾನತೆಯ ಕೊರತೆ ಇದ್ದೇ ಇದೆ. ಬಸವಣ್ಣನವರು ಸಾರಿದ ತತ್ವಗಳನ್ನ ನಿಜವಾಗಿ ಪಾಲನೆ ಮಾಡೋದಕ್ಕೆ ಇನ್ನೂ ಅದೆಷ್ಟು ಶತಮಾನಗಳು ಬೇಕಾಗುತ್ತೋ ಗೊತ್ತಿಲ್ಲ. ಏನಂತೀರಾ?